ಆಧಾರತತ್ವಗಳು -
	ಅನುಭವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಆಧಾರ ನಂಬಿಕೆಗಳು (ಪಾಸ್‍ಚ್ಯುಲೇಟ್ಸ್). ಇವನ್ನು ಅನುಭವದಿಂದ ಸ್ಥಾಪಿಸಲು ಆಗುವುದಿಲ್ಲ. ಇವು ಸ್ವತಸ್ಸಿದ್ಧವೂ (ಆಕ್ಸಿಯಮ್ಸ್) ಅಲ್ಲ. ವಿಜ್ಞಾನಿಗಳು ಮೊದಮೊದಲು ಪ್ರಕೃತಿಯಲ್ಲಿ ಹೊಂದಿಕೆ (ಯೂನಿಟಿ) ಇದೆ ಎಂದು ನಂಬಿ ಅನ್ವೇಷಣೆಗಳಲ್ಲಿ ತೊಡಗಿದ್ದರು. ಹೊಂದಿಕೆ ಎಂದರೆ ಅದರಲ್ಲಿ ಉದ್ದೇಶವಿದೆ ಎಂಬ ಅರ್ಥ ಬರುವುದರಿಂದ ಅಂಥ ಉದ್ದೇಶವನ್ನು ಪ್ರಕೃತಿಗೆ ಆರೋಪಿಸುವುದು ಅಸಂಗತ ಎಂದು ಆ ಆಧಾರ ತತ್ತ್ವವನ್ನು ಬಿಟ್ಟು ಪ್ರಕೃತಿ ಏಕರೂಪವಾಗಿರುತ್ತದೆ ಎಂಬ ಏಕರೂಪ ನಿಯಮವನ್ನು (ಲಾ ಆಫ್ ಯೂನಿಫಾರ್ಮಿಟಿ) ವಿಜ್ಞಾನಕ್ಕೆ ಆಧಾರವಾಗಿ ಇಟ್ಟುಕೊಂಡರು. ಪ್ರಕೃತಿಯಲ್ಲೂ ಏಕರೂಪವಾಗಿದೆ ಎಂದರೆ ಭಿನ್ನತೆ ಇಲ್ಲ ಎಂಬ ಭಾವನೆಗೆ ಅವಕಾಶವಿದೆ. ಯಾವ ರೀತಿ ಭಿನ್ನತೆ ಇಲ್ಲದೆ ಎಲ್ಲವೂ ಏಕರೂಪ ಪಡೆದುದಾದರೆ ಎಲ್ಲಕ್ಕೂ ಒಂದೇ ರೀತಿಯಾದ ಕಾರಣವಿರಬೇಕಾಗುತ್ತದೆ. ಕಾರ್ಯವೂ ಕಾರಣವೂ ಒಂದೇ ಎಂದು ಹೇಳಬೇಕಾಗುತ್ತದೆ. ಅದರ ಕಾರ್ಯ ಬೇರೆ ಕಾರಣ ಬೇರೆ. ಆದ್ದರಿಂದ ಏಕತೆಯ ನಿಯಮವನ್ನು ವಿಜ್ಞಾನದ ಆಧಾರ ನಿಯಮವಾಗಿ ಒಪ್ಪದೆ ಕಾರ್ಯಕಾರಣ ನಿಯಮವನ್ನು ವಿಜ್ಞಾನದ ಆಧಾರತತ್ತ್ವವಾಗಿ ಇಟ್ಟುಕೊಂಡರು. ಕಾಲಕ್ರಮದಲ್ಲಿ ಕಾರ್ಯಕಾರಣನಿಯಮವೂ ಆಬಾಧಿತವಲ್ಲವೆಂದು ತಿಳಿದಾಗ ಅದನ್ನು ಹೇತುವಿನ ಏಕತೆಯ (ಯೂನಿಫಾರ್ಮಿಟಿ ಆಫ್ ರೀಸನ್ಸ್) ತತ್ತ್ವವನ್ನಾಗಿ ಮಾರ್ಪಡಿಸಿದರು. ಒಂದು ಸಂದರ್ಭದಲ್ಲಿ ಅದು ಸರಿಯಾದ ಹೇತು (ಸಂಬಂಧವಾದದ್ದು) ಎಂದು ತಿಳಿಯಬಂದರೆ, ಅದೇ ರೀತಿಯಾದ ಎಲ್ಲ ಸಂದರ್ಭಗಳಲ್ಲೂ ಅದು ಸಮರ್ಪಕವಾದ ಹೇತುವೆಂದು ತಿಳಿಯಬಹುದು. ಇದೂ ತಾತ್ಕಾಲಿಕವಾದ ಆಧಾರತತ್ತ್ವವೆಂದೇ ಭಾವಿಸಬೇಕು. ಇದು ವಿಜ್ಞಾನದ ಅನ್ವೇಷಣೆಗೆ ಸಾಲದೆಂಬ ಭಾವನೆ ಹುಟ್ಟಿದಾಗ ಅದನ್ನು ಸಮಯೋಚಿತವಾಗಿ ಮಾರ್ಪಡಿಸಬಹುದು. ಎಲ್ಲ ಕಾಲಕ್ಕೂ ಒಂದೇ ತತ್ತ್ವ ಆಧಾರತತ್ತ್ವವಾಗಿರಬೇಕಾಗಿಲ್ಲ. ವಿಜ್ಞಾನಕ್ಕೆ ಆಧಾರತತ್ತ್ವವಿರುವಂತೆಯೇ ನೀತಿಜ್ಞಾನಕ್ಕೂ ಒಂದು ಆಧಾರಭಾವನೆ ಇದೆ. ಮನುಷ್ಯನಿಗೆ ಸ್ವಾತಂತ್ರ್ಯವಿರಬೇಕು. ಅದಿಲ್ಲದೆ ಅವನಿಗೆ ಕರ್ತವ್ಯಗಳೂ ಇಲ್ಲ. ಹೊಣೆಗಾರಿಕೆಯೂ ಇಲ್ಲ. ನೀತಿಗೆ ಆಧಾರವಾದ ಸ್ವತಂತ್ರ ತತ್ತ್ವವೂ ನೀತಿಯ ತಿಳಿವೂ ಬೆಳೆದಂತೆಲ್ಲ ಬೇರೆ ಬೇರೆ ರೀತಿಯಾಗಿ ನಿರೂಪಣೆ ಪಡೆಯುತ್ತದೆ.

	ಹಾಗೆಯೇ ಮತಕ್ಕೆ ಪರಮಾರ್ಥವಿದೆ ಎಂಬ ತತ್ತ್ವ ಆಧಾರವಾದದ್ದು. ಇದೂ ಕಾಲೋಚಿತವಾಗಿ ವಿಚಾರಬೆಳೆದಂತೆಲ್ಲ ಬೇರೆ ಬೇರೆಯಾಗಿ ಸೂಚಿಸಲ್ಪಡುತ್ತದೆ.
(ನೋಡಿ- ಆಧಾರಭಾವನೆ)										
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ